ಕಾರ್ಟ್‍ರೈಟ್, ಎಡ್ಮಂಡ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 1743-1823. ಇಂಗ್ಲಿಷ್ ಪರಿಶೋಧಕ, ವಿದ್ಯುತ್ ನೇಯ್ಗೆ ಯಂತ್ರವನ್ನು ಪರಿಶೋಧಿಸಿದ ಖ್ಯಾತಿ ಇವನದು. ನಾಟಿಂಗ್‍ಹಾಂಷೈರಿನ ಮಾರ್ನ್‍ಹ್ಯಾಂ ಎಂಬಲ್ಲಿ ಜನಿಸಿದ. ಇವನ ವಿದ್ಯಾಭ್ಯಾಸ ವೇಕ್‍ಫೀಲ್ಡ್ ಗ್ರಾಮರ್ ಶಾಲೆ ಮತ್ತು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ನಡೆಯಿತು. 1779 ರಲ್ಲಿ ಲೀಸೆಸ್ಟರ್‍ಷೈರಿನ ಗೋಡ್‍ಬೈ ಮಾರ್‍ವುಡ್‍ನ ರೆಕ್ಟರ್ ಆಗಿ ಸೇವೆ ಸಲ್ಲಿಸಿದ. ಅನಂತರ ಲಿಂಕನ್ ಕೆಥೆಡ್ರಲಿನಲ್ಲಿ ಮಠವೇತನ ಪಡೆಯುವ ಕ್ರೈಸ್ತ ಪುರೋಹಿತನಾದ (1786). ಇವನ ಜೀವನದಲ್ಲಿ ಅಕಸ್ಮಾತ್ ಒಂದು ಹೊಸ ತಿರುವುಕಾಣಿಸಿದ್ದು 1784 ರಲ್ಲಿ. ನೇಯ್ಗೆ ಯಂತ್ರಕ್ಕೆ ವಿದ್ಯುತ್ ಸೌಲಭ್ಯವನ್ನು ಒದಗಿಸುವಲ್ಲಿ ಈತನ ಒಂದು ಪ್ರಯತ್ನವಿಲ್ಲದೆ ಹೋಗಿದ್ದ ಪಕ್ಷಕ್ಕೆ ಬಾಳಿನುದ್ದಕ್ಕೂ ಕ್ರೈಸ್ತ ಪುರೋಹಿತನಾಗಿಯೇ ಈತ ಉಳಿಯುತ್ತಿದ್ದ. ತನ್ನ ಪ್ರಯತ್ನದಲ್ಲಿ ಸಫಲತೆ ಕಂಡುಬಂದು ಕೊನೆಗೆ ವಿದ್ಯುತ್ ನೇಯ್ಗೆ ಯಂತ್ರವನ್ನು ರಚಿಸಿದ. ಈ ಯಂತ್ರಕ್ಕೆ ಮೊಟ್ಟಮೊದಲು 1785 ರಲ್ಲಿ ಸ್ವಾಮ್ಯವನ್ನು ಪಡೆದ. ಯಂತ್ರವನ್ನು ಅನೇಕ ರೀತಿಗಳಲ್ಲಿ ಈತ ಸುಧಾರಿಸಿದ ಕಾರಣ ಮತ್ತೆ 1786 ಮತ್ತು 1787 ರಲ್ಲಿ ಪುನಃ ಹೊಸ ಸ್ವಾಮ್ಯವನ್ನುಗಳಿಸಿ ಕ್ರಮೇಣ ಅದನ್ನು ಆಧುನಿಕ ವಿದ್ಯುತ್ ನೇಯ್ಗೆ ಯಂತ್ರವನ್ನಾಗಿಸಿದ ಡೋನ್‍ಕಾಸ್ಟರಿಗೆ ಬಂದು ಅಲ್ಲಿ ನೂಲುವ ಮತ್ತು ನೇಯುವ ಕಾರ್ಖಾನೆಯೊಂದನ್ನು ಪ್ರಾರಂಭಿಸಿದ (1785). ಹತ್ತಿ ಮತ್ತು ಉಣ್ಣೆ ಗಿರಣಿಗಳಿಗೆ ಈತನ ಯಂತ್ರ ಬಲು ಲಾಭದಾಯಕವಾಗಿ ಕಾಣಿಸಿದರೂ ಮೊದಮೊದಲಿಗೆ ತಯಾರಕರು ಹಾಗೂ ಕಾರ್ಮಿಕರಿಂದ ಪ್ರತಿಭಟನೆ ಇತ್ತು. ವಿನಿಯೋಗಿಸಿದ ಹಣ ಹೆಚ್ಚಾಗಿ ಕೊನೆಗೆ ಈ ಕಾರ್ಖಾನೆಯನ್ನು ಸಾಲಗಾರರ ವಶಕ್ಕೆ ಒಪ್ಪಿಸಬೇಕಾಯಿತು. ಈತನ ಅನೇಕ ಯಂತ್ರಗಳಿದ್ದ ಮ್ಯಾಂಚೆಸ್ಟರಿನಲ್ಲಿದ್ದ ಒಂದು ಗಿರಣಿ ಬೆಂಕಿಯ ಅಪಘಾತಕ್ಕೀಡಾಗಿ ಪೂರ್ಣವಾಗಿ ನಾಶಹೊಂದಿತು. ಅನಂತರ ಉಣ್ಣೆಯನ್ನು ಎಕ್ಕುವ ಯಂತ್ರಕ್ಕೆ ಈತ ಸ್ವಾಮ್ಯವನ್ನು 1789 ರಲ್ಲಿ ಗಳಿಸಿಕೊಂಡ. ಈ ಯಂತ್ರವನ್ನು ಸುಧಾರಿಸಿ ಮತ್ತೆ ಕ್ರಮವಾಗಿ 1790 ಮತ್ತು 1792 ರಲ್ಲಿ ಪುನಃ ಸ್ವಾಮ್ಯವನ್ನು ಪಡೆದುಕೊಂಡ. ಪೂರೈಸಿದ ಮಾಲುಗಳ ತಯಾರಿಕೆಯ ವೆಚ್ಚದಲ್ಲಿ ಈ ಯಂತ್ರ ಹೆಚ್ಚು ಮಿತವ್ಯಯ ಸಾಧಿಸಿತು. ಆದರೆ ಸಮಗ್ರ ಆರ್ಥಿಕ ಪರಿಸ್ಥಿತಿ ವಿದ್ಯುತ್ ನೇಯ್ಗೆ ಯಂತ್ರ ಸಾಧಿಸಿದ ಆರ್ಥಿಕ ಪರಿಸ್ಥಿತಿಗಿಂತ ಉತ್ತಮವಾಗಲಿಲ್ಲ. ಈ ದುಬಾರಿ ಖರ್ಚಿನ ಪರಿಸ್ಥಿತಿಯನ್ನು ಗಮನಿಸಿದ ಪಾರ್ಲಿಮೆಂಟ್ ಕಾರ್ಟ್‍ರೈಟನಿಗೆ ಯಂತ್ರ ಸ್ವಾಮ್ಯವನ್ನು 14 ವರ್ಷಗಳ ವರೆಗೆ ವಿಸ್ತರಿಸಿತು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ.

 ಯಂತ್ರ ರಚಿಸಿದ 25 ವರ್ಷಗಳ ತರುವಾಯವೂ ಬ್ರಿಟನಿನಲ್ಲಿ ಕೇವಲ 2,400 ವಿದ್ಯುತ್ ಯಂತ್ರಗಳಿದ್ದುವು. ಕ್ರಮೇಣ ಈ ಸಂಖ್ಯೆ ಬೆಳೆಯಿತು. ವಿದ್ಯುತ್ ನೇಯ್ಗೆ ಯಂತ್ರಕ್ಕೆ ನೀಡಿದ ಎಲ್ಲ ಸೌಲಭ್ಯಗಳನ್ನೂ ಈ ಯಂತ್ರಕ್ಕೆ ಒದಗಿಸಿಕೊಡಬೇಕೆಂಬ ಮನವಿಯೊಂದನ್ನು ಸಕಾರಕ್ಕೆ ಸಲ್ಲಿಸಿದ ಕಾರಣ (1807) ಅಲ್ಲಿನ ಕಾಮನ್ಸ್ ಸಭೆ 10,000 ಡಾಲರ್ ಧನಸಹಾಯವನ್ನು ಮಂಜೂರು ಮಾಡಿತು (1809). ಸೆವೆನ್‍ಒಕ್ಸ್ ಹತ್ತಿರದ ಹಾಲೆಂಡರಿನಲ್ಲಿ ಒಂದು ಬೇಸಾಯ ಭೂಮಿಯನ್ನು ಕಾರ್ಟ್‍ರೈಟ್ ಕೊಂಡುಕೊಂಡು ತನ್ನ ಜೀವನದ ಬಹುತೇಕ ವರ್ಷಗಳನ್ನು ಅಲ್ಲಿಯೇ ಕಳೆದ. ಸಸಿಕ್ಸಿನ ಹೇಸ್ಟಿಂಗ್‍ನಲ್ಲಿ ಈತ ಕಾಲವಾದ. ಈತ ರಚಿಸಿದ ಇತರ ಯಂತ್ರಗಳಲ್ಲಿ ಹಗ್ಗ ತಯಾರಿಸುವ ಯಂತ್ರ (ಕಾರ್ಡ್‍ಲಿಯರ್ ಮಷಿನ್, 1792), ನೀರಿನ ಬದಲು ಅಲ್ಕೊಹಾಲಿನಿಂದ ನಡೆಯುವ ಉಗಿಯಂತ್ರ (1797) ಮತ್ತು ಅನೇಕ ಕೃಷಿ ಉಪಕರಣಗಳು,-ಇತ್ಯಾದಿ ಸೇರಿವೆ.

 